ಕಾನ್‍ಫ್ಯೂಷಸ್

ಕ್ರಿ.ಪೂ. 551-479. ಚೀನದ ಓರ್ವ ಪ್ರಖ್ಯಾತ ಪ್ರತಿಭಾವಂತ ವ್ಯಕ್ತಿ. ರಾಜಕೀಯದ, ನಿತ್ಯಜೀವನದ ಆಚಾರ ವ್ಯವಹಾರಗಳಲ್ಲಿ ಉನ್ನತ ಮಟ್ಟ ಸಾಧಿಸಿದ ಮಹಾಪುರುಷ. ಈತ ಭೋಧಿಸಿದ ಸಾರ್ವಜನಿಕ, ರಾಜಕೀಯ ನೀತಿಬೋಧೆಯ ಆಧಾರದ ಮೇಲೆ ಮುಂದೆ ಕಾನ್‍ಫ್ಯೂಷನಿಸಂ ಎಂಬ ಪಂಥವೊಂದು ತಲೆಯೆತ್ತಿ ಪ್ರಸಿದ್ಧವಾಯಿತು. ಕೂಂಗ್ ಫೂ ಟ್ಸು ಎಂಬುದು ಇವನ ಹೆಸರಿನ ಚೀನೀ ರೂಪ. ಕ್ರಿ.ಪೂ. 551ರಲ್ಲಿ ಷಾಂಟುಂಗ್ ಪ್ರಾಂತ್ಯದ ಲು ಎಂಬ ಜಮೀನ್ದಾರಿಯಲ್ಲಿ ಜನ್ಮವೆತ್ತಿದ. ಇವನು ಷಾಂಗ್ ರಾಜವಂಶಕ್ಕೆ (ಕ್ರಿ.ಪೂ. 1766-1122) ಸೇರಿದವನಾದರೂ ಬಡತನದಲ್ಲಿ ಬೆಳೆದ. ಈತ ಹುಟ್ಟಿದಾಗ 70 ವರ್ಷಗಳ ವೃದ್ಧ ತಂದೆ ಸೈನ್ಯದಲ್ಲಿ ಸಣ್ಣ ಅಧಿಕಾರಿಯಾಗಿದ್ದ. ಮೂರು ವರ್ಷಗಳ ಅನಂತರ ತಂದೆ ಮೃತನಾಗಲು ತಾಯಿ ಬಹು ಕಾರ್ಪಣ್ಯದಿಂದ ಈತನನ್ನು ಸಾಕಿದಳು. ಒಳ್ಳೆ ಶಿಕ್ಷಣ ದೊರಕಿ 17ನೆಯ ವಯಸ್ಸಿನಲ್ಲೇ ಕಾನ್‍ಫ್ಯೂಷಸನಿಗೆ ಸರ್ಕಾರಿ ನೌಕರಿಯೂ ಸಿಕ್ಕಿತು. 18ನೆಯ ವಯಸ್ಸಿನಲ್ಲಿ ವಿವಾಹ ನಡೆದು ಒಬ್ಬ ಮಗ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ತರುವಾಯ ಉಪಾಧ್ಯಾಯವೃತ್ತಿಗೆ ಕೈಹಾಕಿದ. ಕ್ರಿ.ಪೂ. 517ರಲ್ಲಿ ರಾಜಧಾನಿಗೆ ಹೋದಾಗ ಟಾಓಯಿಸಂ ಪಂಥದ ಸ್ಥಾಪನಾಚಾರ್ಯ ಲಾವೊಡ್ಸನೊಡನೆ ಭೇಟಿಯಾಯಿತು. ಇಬ್ಬರಲ್ಲಿ ನಿಕಟ ಪರಿಚಯ ಬೆಳೆಯಿತು. ಕೆಲಕಾಲ ತನ್ನ ಹಿಂಬಾಲಕರೊಂದಿಗೆ ತನ್ನ ತತ್ತ್ವಪ್ರಚಾರಕಾರ್ಯದಲ್ಲಿ ತೊಡಗಿದ್ದ. 52ನೆಯ ವಯಸ್ಸಿನಲ್ಲಿ ಚುಂಗ್‍ಟೂವಿನ ನ್ಯಾಯ ಮೂರ್ತಿಯಾಗಿ ನೇಮಕಗೊಂಡ. ಈ ಕ್ಷೇತ್ರದಲ್ಲಿ ಉತ್ಸಾಹದಿಂದಲೂ ಶ್ರದ್ಧೆಯಿಂದಲೂ ದುಡಿದು ಪರಿಣಾಮಕಾರಿಯಾದ ಸುಧಾರಣೆಗಳನ್ನು ಸೂಚಿಸಿದ. ಕ್ರಮೇಣ ಮಂತ್ರಿ ಪದವಿಗೂ ಏರಿದ. ಇಬ್ಬರು ಬುದ್ಧಿವಂತರಾದ ಶಿಷ್ಯರ ಸಹಾಯದಿಂದಲು ಪ್ರಾಂತ್ಯವನ್ನು ಸಂಪತ್ಸಮೃದ್ಧಿಗಳೆಡೆಗೆ ಕೊಂಡೊಯ್ದ. ಆ ವೇಳೆಗೆ ಇವನ ಆಶ್ರಯದಾತನಾದ ಪ್ರಾಂತ್ಯಧಿಕಾರಿ ಮೃತನಾಗಿ, ತರುವಾಯ ಬಂದ ಪ್ರಮುಖಾಧಿಕಾರಿ ದುರ್ನೀತಿಗೆ ಇಳಿದದ್ದು ಇವನಿಗೆ ಸರಿ ಎನಿಸಲಿಲ್ಲ. ತನ್ನ ತತ್ತ್ವಗಳನ್ನು ಪಾಲಿಸುವ ಅಧಿಕಾರಿ ಬೇರೆಲ್ಲಿಯಾದರೂ ಸಿಕ್ಕಬಹುದೆಂಬ ಆಶೆಯಿಂದ 13 ವರ್ಷಕಾಲ ಅನೇಕ ಕಡೆ ಅಲೆದಾಡಿದ. ಅಂಥವರಾರೂ ಸಿಕ್ಕದಾಗ ನಿರಾಶನಾಗಿ ಪುನಃ ಲು ಪ್ರಾಂತ್ಯಕ್ಕೆ ಹಿಂತಿರುಗಿದ (ಕ್ರಿ.ಪೂ. 483). ಆದರೆ ಅಧಿಕಾರವನ್ನು ಮಾತ್ರ ಸ್ವೀಕರಿಸಲಿಲ್ಲ. ಅನಂತರದ ಐದು ವರ್ಷಗಳನ್ನು ವಿಶ್ರಾಂತಿಯಲ್ಲಿ ಕಳೆದು ತನ್ನ 72ನೆಯ ವಯಸ್ಸಿನಲ್ಲಿ ನಿಧನ ಹೊಂದಿದ. ಮರಣಸಮಯದಲ್ಲಿ ಇವನ ತತ್ತ್ವಗಳಿಂದ ಆಕರ್ಷಿತರಾಗಿದ್ದ ಯುವಕರ ತಂಡವೊಂದು ಇವನ ಸುತ್ತ ಸೇರಿದ್ದು, ಈತನ ತತ್ತ್ವಗಳ ಪ್ರಚಾರಕ್ಕೆ ಸಿದ್ಧರಾಗಿದ್ದರು. ಗುರುವಿನ ಪ್ರಭಾವದಿಂದ ಆ ಶಿಷ್ಯರು ಸರ್ಕಾರದ ಉನ್ನತ ಪದವಿಗಳನ್ನು ದೊರಕಿಸಿ ಕೊಂಡರಾದರೂ ಯಾರು ಬಹುಕಾಲ ಸಾಕಷ್ಟು ತತ್ತ್ವನಿಷ್ಠರಾಗಿ ಉಳಿಯಲಿಲ್ಲ.

 ಕಾನ್‍ಫ್ಯೂಷಸ್ಸನ ಗುಣಗಳು ಅಪಾರ. ಸಾಧುಸ್ವಭಾವ, ಗೌರವ ವರ್ತನೆಗಳಿಗಿವನು ಹೆಸರಾಗಿದ್ದ. ನಿಸ್ಸ್ವಾರ್ಥ, ಪ್ರಾಮಾಣಿಕ ಹಾಗೂ ಶೀಲವಂತ ವ್ಯಕ್ತಿಯೀತ. ಈ ಗುಣಗಳಿಂದ ಅಂದಿನ ಸಮಾಜ ಜೀವನದಲ್ಲಿ ಗಣ್ಯಸ್ಥಾನ ಗಳಿಸಿದರೂ ತಾನೊಬ್ಬ ಸುಧಾರಕನೇ ವಿನಾ ಪ್ರವಾದಿಯಲ್ಲ ಎಂದು ಹೇಳಿಕೊಂಡುದು ಈತನ ಘನತೆಗೊಂದು ನಿದರ್ಶನ. ಚೀನದ ಜನತೆಗೆ ವ್ಯಾವಹಾರಿಕ ಸಾಮಾಜಿಕ ಜೀವನದಲ್ಲಿ ಸಾತ್ತ್ವಿಕ ಹಾಗೂ ಸರಳಮಾರ್ಗದ ತತ್ತ್ವಗಳನ್ನು ಬೋಧಿಸಿದವರಲ್ಲಿ ಕಾನ್‍ಫ್ಯೂಷಸ್ ಮೊದಲಿಗ. ಉಪದೇಶವನ್ನು ಮನೋಜ್ಞವಾಗಿ ಮಾಡಲು ಈತ ಇತಿಹಾಸ ಕಾವ್ಯ ಮತ್ತು ಸಂಗೀತ ಮಾಧ್ಯಮಗಳನ್ನು ಬಳಸಿಕೊಂಡು ಮೊದಲಯ ಸಾತ್ತ್ವಿಕವಾಗೂ ತರುವಾಯ ಪ್ರಯೋಗಾತ್ಮಕವಾಗೂ ಬೋಧಿಸುತ್ತಿದ್ದ; ಔದ್ಧತ್ಯದಿಂದ ಅಥವಾ ಅಧಿಕಾರಪೂರ್ವಕ ಒತ್ತಾಯಿಸದೇ ಸ್ವಂತ ಆಚರಣೆಯಿಂದ ಶಿಷ್ಯರಿಗೆ ಮಾದರಿಯಾಗಿರುತ್ತಿದ್ದುದೇ ಈತನ ವೈಶಿಷ್ಟ್ಯ. ಅಂಧಾನುಕರಣೆ ಮಾಡದೆ. ಸ್ವತಃ ಯೋಚಿಸಿ. ತಮ್ಮ ಕಾರ್ಯಗಳ ರೀತಿಯನ್ನು ನಿರ್ಧರಿಸಲು ಶಿಷ್ಯವರ್ಗಕ್ಕೆ ಉತ್ತೇಜನ ನೀಡುತ್ತಿದ್ದ. ತನ್ನ ಶಿಷ್ಯರನ್ನು ಆರಿಸುವುದರಲ್ಲೂ ಸಮತಾಭಾವ ತೋರಿ ಬಡವ ಬಲ್ಲಿದರೆಂಬ ಭೇದಗಳಿಗೆ ಅವಕಾಶ ನೀಡದೆ ಅವರ ಸಚ್ಚಾರಿತ್ರ್ಯ ಮತ್ತು ಬೌದ್ಧಿಕ ಸಾಮಾಥ್ರ್ಯಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದ. ಈತನನ್ನು ಬೋಧಕನೆನ್ನುವುದಕ್ಕಿಂತಲೂ ಸುಧಾರಕನೆನ್ನುವುದು ಹೆಚ್ಚು ಉಚಿತ. ವಿದ್ವಾಂಸನೆಂಬುದು ನಿಜವಾದರೂ ಈತನ ಕೃತಿಗಳೆಂದು ಹೇಳಬಹುದಾದ ಗ್ರಂಥಗಳಾವುವೂ ಕಾಣಬರುವುದಿಲ್ಲ.

 ಕಾನ್‍ಫ್ಯೂಷಸನ ಜೀವಿತಕಾಲ ಚೀನದ ಇತಿಹಾಸದಲ್ಲಿ ಸ್ವಾರಸ್ಯವಾದುದು. ಚೌವಂಶ ಇಳಿಗತಿಯಲ್ಲಿತ್ತು. ದೇಶದ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ತುಂಬಾ ಏರುಪೇರುಗಳಾಗುದ್ದುವು. ಅಧಿಕಾರಕ್ಕಾಗಿ ಪ್ರಾಂತ್ಯಗಳಲ್ಲಿ ತಿಕ್ಕಾಟಗಳಿದ್ದುವು. ಜನರು ರಾಜಪ್ರಭುತ್ವವನ್ನೇ ಬಯಸುತ್ತಿದ್ದರೂ ಒಟ್ಟಿನಲ್ಲಿ ದೇಶ ಒಗ್ಗಟ್ಟಿನಿಂದಲೂ ಶಿಸ್ತುಸಂಯಮದಿಂದಲೂ ಬಾಳ್ವೆ ನಡೆಸಬೇಕೆಂಬುದನ್ನು ಮನಗಂಡಿದ್ದರು. ಇದಕ್ಕಾಗಿ ನಿರ್ದಿಷ್ಟವಾದ ಧ್ಯೇಯಧೋರಣೆಗಳನ್ನು ಪ್ರತಿಪಾದಿಸಬಲ್ಲ ಒಬ್ಬ ಮೇಧಾವಿ. ಸುಧಾರಕ ಅತ್ಯಗತ್ಯ ಎಂದು ತಿಳಿದಿದ್ದರು. ಆ ಕಾಲದಲ್ಲಿದ್ದ ಪ್ರಭಾವಿ ವ್ಯಕ್ತಿಗಳೂ ಕೂಡ ರಾಜಕೀಯದ ಕಟ್ಟುಪಾಡಿಗಿಂತ ನೈತಿಕ ಧ್ಯೇಯಗಳೇ ಶ್ರೇಷ್ಠವಾದುವು. ಅವುಗಳ ಆಚರಣೆಗಾಗಿ ತವಕಗೊಂಡಿದ್ದರು. ಇಂಥ ಸಮಯದಲ್ಲೇ ಕಾನ್‍ಫ್ಯೂಷsಸ್ ತನ್ನ ನೀತಿಪ್ರಧಾನ ಮಾರ್ಗವನ್ನು ಪ್ರಚಾರ ಮಾಡಲಾರಂಭಿಸಿದ್ದು. ಗೌತಮ ಬುದ್ಧನ ಸಮಕಾಲೀನನೀತಿ ಕ್ರಿ, ಪೂ. 5-4ನೆಯ ಶತಮಾನಗಳಲ್ಲಿದ್ದ ಗ್ರೀಕ್ ತತ್ತ್ವವೇತ್ತರ ವಿಚಾರಗಳಿಗೆ ಕಾನ್‍ಫ್ಯೂಷಸ್‍ನ ತತ್ತ್ವಗಳು ಸರಿಹೋಲುತ್ತವೆ.

 ಕಾನ್‍ಫ್ಯೂಷಸನ ತತ್ತ್ವಗಳು ಮತೀಯವಲ್ಲ; ನಿತ್ಯ ಜೀವನದಲ್ಲಿ ಅನುಸರಿಸಬೇಕಾದ ಸಾಮಾನ್ಯ ನಿಯಮಗಳವು; ತನ್ಮೂಲಕ ಸಮಾಜ ಮತ್ತು ರಾಜ್ಯದ ಉದ್ಧಾರಕ್ಕೆ ಸಾಧಕವೆನಿಸತಕ್ಕವು. ಸ್ವಂತ ಮತ್ತು ಸಾಮೂಹಿಕ ಸಂಬಂಧಗಳಲ್ಲಿ ವ್ಯಕ್ತಿ ಯಾವ ರೀತಿ ವರ್ತಿಸಬೇಕು ಎಂಬುದೇ ಆ ತತ್ತ್ವಗಳ ಸಾರಾಂಶ. ಕಾನ್‍ಫ್ಯೂಷಸನ ಮತ ಹೀಗಿದೆ; ವಿಶ್ವದಲ್ಲಿ ನಿರೂಪಕ ಶಕ್ತಿಯುಳ್ಳದ್ದು ಸ್ವರ್ಗವೊಂದೇ. ಸಂಸಾರದಲ್ಲಿ ತಂದೆಗೆ ಆ ಅಧಿಕಾರವುಂಟು. ರಾಜ್ಯದಲ್ಲಿ ರಾಜನ ಸ್ಥಾನಮಾನ ವಿಶ್ವದಲ್ಲಿನ ಸ್ವರ್ಗದಂತೆ, ಸಂಸಾರದಲ್ಲಿನ ತಂದೆಯಂತೆ; ಅವನೇ ರಾಜ್ಯದ ನಿರೂಪಕ ಶಕ್ತಿ. ಸಂಸಾರದ ಮುಖ್ಯಸ್ಥನಿಗೆ ವಿಧೇಯನಾಗಿರುವುದು, ಅನೂಚಾನವಾಗಿ ಬಂದ ಪೂಜ್ಯತೆ ತೋರುವುದು - ಇವೆರಡೂ ಸಂಸಾರ ಮತ್ತು ರಾಜಕಿಯ ಜೀವನಕ್ಕೆ ಅಸ್ತಿಭಾರವಿದ್ದಂತೆ. ಇದರಂತೆ ಜನ ನಡೆದುಕೊಂಡರೆ ಸೌಹಾರ್ದ ಏರ್ಪಡುತ್ತದೆ. ಜನತೆಯ ಅತಿಶಯವಾದ ಸುಖಕ್ಕೆ ಶ್ರಮಿಸಿ ಮಾನವಸ್ವಭಾವಕ್ಕನುಗುಣವಾದ ರೀತಿಯಲ್ಲಿ ಮತ್ತು ಕಾಲದೇಶದ ಸ್ಥಿತಿಗತಿಗನುಸಾರವಾಗಿ ರೀತಿನೀತಿಗಳನ್ನು ರೂಪಿಸುವುದು. ಆದರ್ಶ ಆಡಳಿತದ ಗುರಿ. ಅದಕ್ಕಾಗಿ ಶ್ರಮಿಸಿದ ಮಾನವ ಪ್ರೀತಿಯೇ ಸದ್ಗುಣ. ಮಾನವ ಪ್ರಕೃತಿಯನ್ನು ತಿಳಿಯುವುದೇ ಬುದ್ಧಿವಂತಿಕೆ. ಇಡೀ ಮಾನವಕುಲ ಒಂದು ಸಂಸಾರ. ತನ್ನ ಪ್ರಗತಿಯನ್ನು, ಸ್ಥಾನಮಾನಗಳನ್ನು ಅಪೇಕ್ಷಿಸುವವ ಇತರರ ಪ್ರಗತಿ, ಸ್ಥಾನಮಾನಗಳ ಸಾಧನೆಗೆ ಶ್ರಮಿಸುವುದೇ ಒಳ್ಳೆಯ ಮಾರ್ಗ. ಆದುದರಿಂದ ಪ್ರಭುತ್ವ ಜನತೆಯ ಸಹಕಾರೀ ಸಂಸ್ಥೆಯಾಗಿರಬೇಕು. ಜನತೆಯ ಸುಖಸಂಪತ್ತುಗಳ ಸಾಧನೆ ಮಾಡಬಲ್ಲವರೇ ಆಡಳಿತದಲ್ಲಿರಲು ಅರ್ಹರು. ಆದುದರಿಂದ ಆನುವಂಶಿಕ ರಾಜರು ಅರ್ಹರೂ ಸನ್ಮಾರ್ಗಿಗಳು ಆದ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಆಡಳಿತವನ್ನು ವಹಿಸುವುದೊಳ್ಳೆಯದು.

 ಕಾನ್‍ಫ್ಯೂಷಸನ ಈ ತತ್ತ್ವಗಳಿಗೂ ಅನಂತರ ಕಾಲದ ಕಾನ್‍ಫ್ಯೂಷನಿಸಮಿನ ಆಚರಣೆಗಳಿಗೂ ಹಲವಾರು ಪ್ರಮುಖ ವ್ಯತ್ಯಾಸಗಳು ಕಂಡುಬರುತ್ತವೆ. ಮಹಾಪುರುಷರ ಬೋಧನೆಗಳು ಕಾಲಕ್ರಮೇಣದಲ್ಲಿ ವಿಕೃತಗೊಳ್ಳುವುದು ಸಾಮಾನ್ಯ. ಆದರೂ ಅನಂತರ ಕಾಲದಲ್ಲಿ- ಉದಾ: ಹ್ಯಾನ್ ವಂಶದ ಕಾಲ ಕ್ರಿ,ಪೂ. 202 ರಿಂದ ಕ್ರಿ,ಶ. 221ರವರೆಗೆ ಈತನ ಅನೇಕ ಬೋಧನೆಗಳು ಕಾರ್ಯಗತವಾದುವು. ಸಮಾಜದ ಕೆಳವರ್ಗದಲ್ಲಿ ಹುಟ್ಟಿದವರು ಸಹ ತಮ್ಮ ಸದ್ಗುಣ ದಕ್ಷತೆಗಳಿಂದ ಮಂತ್ರಿಗಳಾಗಬಹುದಿತ್ತು. ದೇಶದ ಆಗುಹೋಗುಗಳನ್ನು ನಿರ್ಧರಿಸುವ ಅಧಿಕಾರ ಅವರ ವರೆಗೂ ಬರುತ್ತಿತ್ತು. ಒಂದಲ್ಲ ಒಂದು ವಿಧದಲ್ಲಿ ಈತನ ತತ್ತ್ವಗಳು ಚೀನ ಮಾತ್ರವಲ್ಲದೆ ಇಡೀ ಆಗ್ನೇಯ ಏಷ್ಯದ ಸಂಸ್ಕøತಿ, ಇತಿಹಾಸಗಳ ಮೇಲೆ ಪ್ರಭಾನ ಬೀರಿವೆ.

(ಕೆ.ಜೆ.; ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ